ಹುಂಚ : ತಮ್ಮ ಕಾರ್ಯಕ್ಷೇತ್ರದ ಅಭಿವದ್ಧಿಗೆ ಸೇವಾ ಪ್ರೀತಿಯಿಂದ ಸೇವಾ ಪ್ರತಿನಿಧಿಯಾಗಿ ಹೊರಹೊಮ್ಮಬೇಕು ಎಂದು ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಹುಂಚ ಗ್ರಾಮದಲ್ಲಿ ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾರ್ಗದರ್ಶನ ನೀಡಿದ ಅವರು ಹೊಸನಗರ ತಾಲ್ಲೂಕಿನಲ್ಲಿ ಬಡವರ ಆರ್ಥಿಕ ಅಭಿವೃದ್ಧಿಗೆ ಯೋಜನೆಯ ಮುಖೇನ ಸ್ವಸಹಾಯ ಸಂಘದ ಚಳುವಳಿ ಬಹಳ ಅರ್ಥಪೂರ್ಣವಾಗಿ ಸಾಗುತ್ತಿದೆ ಇದರೊಂದಿಗೆ ಈ ಭಾಗದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ ಹೆಚ್ಚಿನ ಮಾಹಿತಿ ಮತ್ತು ಆರ್ಥಿಕ ನೆರವು ನೀಡಿ ಕೃಷಿ ಕುಟುಂಬವನ್ನು ಅಭಿವದ್ಧಿಗೊಳಿಸಬೇಕು ಹಾಗೂ ಸಂಘದ ಸದಸ್ಯರುಗಳಿಗೆ ತಾಯಿಯಾಗಿ, ಪೋಷಕರಾಗಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮಾಡಬೇಕು ಎಂದರು.
ತಮ್ಮ ಕಾರ್ಯಕ್ಷೇತ್ರದ ಸಂಪೂರ್ಣ ಚಿತ್ರಣ ತಿಳಿದು ಭರವಸೆಯ ಹಾದಿಯಲ್ಲಿ ನಡೆಯಬೇಕು ಕೇವಲ ಸಾಲಕ್ಕಾಗಿ ಸಂಘ ಅಲ್ಲ ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಬೌದ್ಧಿಕ ಅಭಿವೃದ್ಧಿಗೆ ಶ್ರಮಿಸುವುದು ಸಂಘ. ಧರ್ಮಸ್ಥಳ ಸಂಘದ ಎಲ್ಲಾ ಕಾರ್ಯಕ್ರಮಗಳನ್ನು ಕಾರ್ಯಕ್ಷೇತ್ರದಲ್ಲಿ ಅಳವಡಿಸಿ ಸಾಮಾನ್ಯ ಜನರ ಮೆಚ್ಚುಗೆಗೆ ಕಾರ್ಯಕರ್ತರು ಪಾತ್ರರಾಗಬೇಕು ಎಂದರು.
ಈ ಸಂದರ್ಭದಲ್ಲಿ ಪೂಜ್ಯರ ಆಪ್ತ ಕಾರ್ಯದರ್ಶಿ ಮಹಾವೀರ ಅಜ್ರಿ, ಸುದರ್ಶನ್ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನಿರೂಪಿಸಿದರು. ಹೊಸನಗರ ಯೋಜನಾಧಿಕಾರಿ ಬೇಬಿ ಸ್ವಾಗತಿಸಿ, ರಿಪ್ಪನ್ ಪೇಟೆ ಮೇಲ್ವಿಚಾರಕ ಹರೀಶ್ ಕುಮಾರ್ ವಂದನಾರ್ಪಣೆಯನ್ನು ನೆರವೇರಿಸಿದರು