Hindu Sangama programs will be organized at the panchayat level in Hosanagara Taluk from January 22 to February 8, aiming to promote cultural awareness, social harmony, and self-reliant Hindu society.
ರಿಪ್ಪನ್‌ಪೇಟೆ: ಹಿಂದೂ ಸಮಾಜದ ಸಂಘಟನೆ, ಸ್ವಾವಲಂಬನೆ, ಸಂಸ್ಕಾರಯುಕ್ತ ಹಾಗೂ ಸಾಮರಸ್ಯಯುಕ್ತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಹೊಸನಗರ ತಾಲೂಕಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ವಿನಯ್ ಶೆಟ್ಟಿ ತಿಳಿಸಿದರು.
ಪಟ್ಟಣದ ಆರ್.ಎಸ್.ಎಸ್. ಕಾರ್ಯಾಲಯ ‘ಪಾಂಚಜನ್ಯ’ದಲ್ಲಿ ಆಯೋಜನಾ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಸಮಾಜವೇ ಒಟ್ಟಾಗಿ ಈ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದರು.
ಹೊಸನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯು ತಾಲೂಕಿನ 30 ಪಂಚಾಯಿತಿಗಳನ್ನು ಪ್ರತಿನಿಧಿಸುವಂತೆ ಆಯ್ದ 17 ಸ್ಥಳಗಳಲ್ಲಿ ಜನವರಿ 22ರಿಂದ ಫೆಬ್ರವರಿ 8ರವರೆಗೆ ವಿವಿಧ ದಿನಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಮ್ಮ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗಿರದೆ, ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಧರ್ಮ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಶಕ್ತಿಕೇಂದ್ರಗಳಾಗಬೇಕು. ವ್ಯಕ್ತಿಯು ತನ್ನ, ಕುಟುಂಬದ ಹಾಗೂ ಸಮಾಜದ ನಡವಳಿಕೆಯಲ್ಲಿ ಸಕಾರಾತ್ಮಕ ಪರಿವರ್ತನೆ ತರಲು ಜವಾಬ್ದಾರಿಯುತ ಪಾತ್ರವಹಿಸಬೇಕೆಂದು ವಿನಯ್ ಶೆಟ್ಟಿ ಹೇಳಿದರು.
ಕುಟುಂಬದಲ್ಲಿ ಸಂಸ್ಕೃತಿ–ಸಂಸ್ಕಾರಗಳ ಸಂವರ್ಧನೆ, ಪರಿಸರದ ಬಗ್ಗೆ ಕಾಳಜಿ, ಸ್ವದೇಶಿ ವಸ್ತುಗಳ ಬಳಕೆ, ಜೀವನ ಪದ್ಧತಿಯ ವಿಕಾಸ, ಸಮಾಜದ ಎಲ್ಲರೊಂದಿಗೆ ಸಾಮರಸ್ಯ ಹಾಗೂ ನಾಗರಿಕ ಕರ್ತವ್ಯಗಳ ನಿತ್ಯ ಪಾಲನೆ—ಈ ಪಂಚ ಪರಿವರ್ತನೆಯ ಅಂಶಗಳು ಸಮಾಜದಲ್ಲಿ ಅರಳಬೇಕೆಂಬುದು ಹಿಂದೂ ಸಂಗಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಮೂಗುಡ್ತಿ, ಪಂಚಾಯಿತಿ ಮಟ್ಟದಲ್ಲಿ ಸಂಘಟನೆಯ ಮೂಲಕ ಹಿಂದೂ ಧರ್ಮ–ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಹಾಗೂ ಸಮಗ್ರ ವಿಕಾಸಕ್ಕಾಗಿ ಜಾಗೃತ ಹಿಂದೂ ಸಮಾಜ ಕಟ್ಟುವ ಆಶಯದೊಂದಿಗೆ ಈ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಎಲ್ಲಾ ಹಿಂದೂ ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜ ಜಾಗೃತಿಯ ಈ ಕಾರ್ಯದಲ್ಲಿ ತಮ್ಮ ಪಾತ್ರ ನಿರ್ವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿದಂಬರರಾವ್ ಕೋಡೂರು, ಧನ್ಯಶ್ರೀ ರಮೇಶ್, ಎನ್.ಆರ್. ದೇವಾನಂದ, ಧರ್ಮೇಂದ್ರ ಕೊಳವಂಕ, ನಿವೃತ್ತ ಮಹಿಳಾ ಸೈನಿಕರಾದ ಪದ್ಮ, ಪೂರ್ಣಿಮಾ ಕಿಣಿ, ಅನಂತಮೂರ್ತಿ, ಸೋಮಶೇಖರ್, ಕೋಟೇಶ್ ಯಡೂರು, ವಸಂತ್ ಬೆಳ್ಳೂರು, ಕುಶಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
