
ಉರುಳಿಗೆ ಸಿಲುಕಿ ಚಿರತೆ ಸಾವು
ಶಿವಮೊಗ್ಗ: ಅರಣ್ಯದ ಅಂಚಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಪ್ರಾಣಿಹಿಡಿಯುವ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಶಿರಾಳಕೊಪ್ಪ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತಾಳಗುಂದ ರಾಜ್ಯ ಅರಣ್ಯ ಪ್ರದೇಶಕ್ಕೆ ಸೇರುವ ಖಾಸಗಿ ಜಮೀನಿನ ಅಂಚಿನಲ್ಲಿರುವ ಕಾಡಿನ ದಾರಿಯಲ್ಲಿ ಈ ಉರುಳು ಅಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಪ್ರಾಥಮಿಕ ಅಂದಾಜು ವ್ಯಕ್ತಪಡಿಸಿದೆ.
ಕೆಲವು ದಿನಗಳಿಂದ ದುರ್ವಾಸನೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲನೆ ನಡೆಸಿದಾಗ, ಉರುಳಿಗೆ ಸಿಲುಕಿ ಕೊಳೆತ ಸ್ಥಿತಿಯಲ್ಲಿ ಮಲಗಿದ್ದ ಚಿರತೆಯ ದೇಹ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ (RFO) ಜಾವೀದ್ ಮತ್ತು ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯ ಪ್ರಕಾರ, ಇದು ಸ್ಪಷ್ಟವಾಗಿ ಮಾನವ ನಿರ್ಮಿತ ಉರುಳು ಆಗಿದ್ದು, ಕಾಡುಪ್ರಾಣಿಗಳನ್ನು ಹಿಡಿಯುವ ಅಕ್ರಮ ಕಾರ್ಯದ ನೇರ ಸಾಕ್ಷಿಯಾಗಿದೆ. ಇಡೀ ಪ್ರದೇಶದಲ್ಲಿ ಹೆಚ್ಚುವರಿ ಗಸ್ತು ನಿಯೋಜಿಸಲಾಗಿದ್ದು, ಉರುಳು ಹಾಕಿದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.



