
ಅಂಗನವಾಡಿಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ಮೊಟ್ಟೆ , ಧಾನ್ಯ ಹಾಳುಗೆಡವಿದ ದುಷ್ಕರ್ಮಿಗಳು
ಶಿವಮೊಗ್ಗ: ತಾಲೂಕಿನ ಕುಂಸಿ ಗ್ರಾಮದ ಅಂಗನವಾಡಿ ಕೇಂದ್ರ ಮತ್ತು ಮಹಿಳಾ ಒಕ್ಕೂಟದ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮದ್ಯಪಾನದಲ್ಲೇ ತೇಲಿದ ದುಷ್ಕರ್ಮಿಗಳು ಮೊದಲು ಕೊಠಡಿಗಳ ಬೀಗಗಳನ್ನು ಮುರಿದು ಒಳನುಗ್ಗಿದ್ದಾರೆ. ನಂತರ ಟೇಬಲ್ ಸುತ್ತಲು ಕುರ್ಚಿಗಳನ್ನು ಅಣಿಗೊಳಿಸಿ ಕುಳಿತು ಮದ್ಯ ಸೇವಿಸಿದ್ದು, ಸ್ಥಳದಲ್ಲಿ ಮದ್ಯದ ಬಾಟಲಿಗಳ ಕವರ್‌ಗಳು ಹಾಗೂ ಟವೆಲ್‌ಗಳು ಚೆಲ್ಲಾಪಿಲ್ಲಿಯಾಗಿರುವುದು ಪತ್ತೆಯಾಗಿದೆ.
ಅಲ್ಲದೆ, ಸರ್ಕಾರದಿಂದ ಅಂಗನವಾಡಿಗೆ ನೀಡಲಾಗಿದ್ದ ಆಹಾರ ಧಾನ್ಯಗಳನ್ನು ಚೆಲ್ಲಿಹಾಕಿ ಹಾಳುಮಾಡಿರುವುದಲ್ಲದೆ, ಎರಡು ಟ್ರೇಗಳಷ್ಟು ಮೊಟ್ಟೆಗಳನ್ನು ಬೇಯಿಸಿ ತಿಂದು, ಉಳಿದ ಆಹಾರ ಪದಾರ್ಥಗಳನ್ನೂ ನಾಶಪಡಿಸಿರುವುದು ಬೆಳಕಿಗೆ ಬಂದಿದೆ.
ಘಟನೆಯ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.



