ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ
ರಿಪ್ಪನ್ ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸ್ತ್ಗಳದಲ್ಲಿಯೇ ಓರ್ವ ವೃದ್ದೆ ಮೃತಪಟ್ಟಿದ್ದು ಇನ್ನಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಚಿಪ್ಪಿಗರ ಕೆರೆಯಲ್ಲಿ ನಡೆದಿದೆ.
ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರುಗುತ್ತಿರುವ ಸಂಧರ್ಭದಲ್ಲಿ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಸ್ವಿಫ಼್ಟ್ ಕಾರು (ka53 MD 0964) ಏಕಾಏಕಿ ಕೆರೆಗೆ ಉರುಳಿಬಿದ್ದಿದೆ. ಈ ಸಂಧರ್ಭದಲ್ಲಿ ರಸ್ತೆಯಲ್ಲಿ ಹಾದುಹೋಗುತಿದ್ದ ಸಾರ್ವಜನಿಕರು ಕೂಡಲೇ ಸಹಾಯಕ್ಕೆ ತೆರಳಿ ಇಬ್ಬರನ್ನು ರಕ್ಷಿಸಿದ್ದಾರೆ ಆದರೆ ಅಷ್ಟರಲ್ಲಾಗಲೇ ವೃದ್ದೆಯ ಪ್ರಾಣಪಕ್ಶಿ ಹಾರಿಹೋಗಿತ್ತು.
ತ್ಯಾಗರ್ತಿಯ ಪಾರ್ವತಮ್ಮ(65) ಕೋಂ ಹುಚ್ಚಪ್ಪ ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಮೃತದೇಹವನ್ನು ರಿಪ್ಪನ್ ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.
ಕಾರಿನಲ್ಲಿ ಮೂವರು ತೆರಳುತಿದ್ದು ,ಯುವಕ ಹಾಗೂ ಓರ್ವ ಯುವತಿಯನ್ನು ಸ್ಥಳೀಯರು ತಮ್ಮ ಸಮಯ ಪ್ರಜ್ಞೆಯಿಂದ ತಮ್ಮ ಜೀವದ ಹಂಗು ತೊರೆದು ಕಾಪಾಡಿ ತಕ್ಷಣ ಸ್ಥಳಿಯ ಆಸ್ಪತ್ರೆಗೆ ಗಾಯಾಳುಗಳನ್ನು ಕರೆತಂದಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಗಾಯಾಳುಗಳನ್ನು ವಿಚಾರಿಸಿ ಕೂಡಲೇ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದರು.
ಪ್ರಾಣದ ಹಂಗು ತೊರೆದು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಗಿರೀಶ್ , ಇಮ್ರಾನ್ ಹಾಗೂ ಮುತ್ತಲೀಬ್ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದಿಂದ ಅಭಿನಂದನೆಗಳು.