Headlines

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್

ರಿಪ್ಪನ್ ಪೇಟೆ : ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ನೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವಂತಾಗಬೇಕು. ಕ್ರೀಡೆ ಸಹೋದರತ್ವವನ್ನು ಬೆಳಸುತ್ತದೆ. ದ್ವೇಷ ಅಸೂಯೆಯನ್ನು ದೂರ ಮಾಡುವ ಮೂಲಕ ಸಾಮರಸ್ಯವನ್ನು ಬೆಳಸುವಲ್ಲಿ ಕ್ರೀಡೆ ಉತ್ತಮ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿಯ ಪಿ.ಎಂ.ಘೋಷಣ್ ಸಹಾಯಕ ನಿರ್ದೇಶಕ ಜಿ.ಶೇಷಾಚಲ ನಾಯಕ್ ತಿಳಿಸಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಿವಿಧ ಗ್ರಾಮ ಪಂಚಾಯ್ತಿ ಸಮೂಹ ಸಂಪನ್ಮೂಲ ಕೇಂದ್ರ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಇವರುಗಳ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಕೆರೆಹಳ್ಳಿ ಹೋಬಳಿ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ ಬಾಲಕಿಯರ ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಹೊಸನಗರ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಬಂಡಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಕ್ರೀಡೆ ವಿದ್ಯಾರ್ಥಿಗಳಲ್ಲಿನ ಕೀಳರಿಮೆಯನ್ನು ದೂರ ಮಾಡಿ ಉತ್ತಮ ಆರೋಗ್ಯವಂತರನ್ನಾಗಿಸಲು ಸಹಕಾರಿಯಾಗಿದೆ. ಸೋಲು-ಗೆಲುವು ಮುಖ್ಯವಾಗದೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಅಧೀಕ್ಷಕ ಯುವರಾಜ್ ಒಡೆಯರ್ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತ್ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಗಣಪತಿ ಗವಟೂರು, ಶಿಕ್ಷಣ ಸಂಯೋಜಕರಾದ ಮೂರ್ತಿನಾಯ್ಕ್, ಕರಿಬಸಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ರಾಘವೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಂಗಾನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಗದೀಶ ಕಾಗಿನಲ್ಲಿ, ಶಿವಮೂರ್ತಿ, ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಎನ್.ಮಂಜುನಾಥ, ಕೆ.ನಾಗರಾಜ, ಹೆಚ್. ಸಂತೋಷ, ಅರವಿಂದ್, ರುಹಿನ್‌ತಾಜ್ ಇನ್ನಿತರರು ಹಾಜರಿದ್ದರು.
ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ಎನ್.ಮಂಜುನಾಥ ಸ್ವಾಗತಿಸಿದರು. ಅರುಣ್ ನಿರೂಪಿಸಿದರು. ಸಂತೋಷ ವಂದಿಸಿದರು.

Exit mobile version