Headlines

ಹೂವಿನಕೋಣೆ ಶಾಲೆಯ ತೊಟ್ಟಿಗೆ ವಿಶಪ್ರಾಶಣ ಪ್ರಕರಣ: ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ

ಹೂವಿನಕೋಣೆ ಶಾಲೆಯ ತೊಟ್ಟಿಗೆ ವಿಶಪ್ರಾಶಣ ಪ್ರಕರಣ: ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆ ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಹೇಯ ಘಟನೆಯ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಗಂಭೀರತೆಯಿಂದ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯನಿರ್ವಹಣೆ ಆರಂಭಿಸಿದ್ದು, ತನಿಖೆಗೆ ಹಲವು ಆಯಾಮಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ ಕೆ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಪ್ರಕರಣ ಭೇಧಿಸಲು ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ. ಈ ಕಾರ್ಯಾಚರಣೆಗೆ ಒಟ್ಟು 18 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವ ವಹಿಸಲಿದ್ದಾರೆ.

ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಲು ವಿಶೇಷ ತಂಡವನ್ನು ಕಳುಹಿಸಲಾಗಿದೆ.ಟವರ್ ಡಂಪ್‌ ಮತ್ತು ಸಿಸಿ ಟಿವಿ ದೃಶ್ಯಾವಳಿಗಳ ವಿಶ್ಲೇಷಣೆಗಾಗಿ ಐದು ಮಂದಿ ಪೊಲೀಸರನ್ನು ನೇಮಿಸಲಾಗಿದೆ.
ಹೂವಿನಕೋಣೆ ಹಾಗೂ ಸುತ್ತಲ ಪರಿಸರದಿಂದ ಮಾಹಿತಿ ಸಂಗ್ರಹಣೆಗಾಗಿ ಎಂಟು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆಗಾಗಿ ಇನ್ನೊಂದು ಐದು ಮಂದಿ ಪೊಲೀಸರ ತಂಡವನ್ನು ರೂಪಿಸಲಾಗಿದೆ.

ಇಂದು ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಲಿದ್ದು, ಸ್ಥಳೀಯರಿಂದ ಮಾಹಿತಿ ಪಡೆದು ತನಿಖೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.

ಈ ಪ್ರಕರಣವು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಮಟ್ಟದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರು ತನಿಖೆಯ ಪ್ರಗತಿಗಾಗಿ ಕಾದು ನೋಡುತ್ತಿದ್ದಾರೆ.

Exit mobile version