ಲಿಂಗನಮಕ್ಕಿ ಜಲಾಶಯದ ಎಲ್ಲಾ ಗೇಟ್‌ಗಳು ಓಪನ್ – ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತ
ಸಾಗರ: ಲಿಂಗನಮಕ್ಕಿ ಜಲಾಶಯದ ಎಲ್ಲಾ ರೇಡಿಯಲ್ ಗೇಟ್‌ಗಳನ್ನು ಗುರುವಾರ ಮತ್ತೆ ತೆರೆಯಲಾಗಿದೆ. ಇದರ ಪರಿಣಾಮವಾಗಿ ಶರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಜೋಗ ಜಲಪಾತವು ಭಾರೀ ರಭಸದಿಂದ ಹರಿಯುತ್ತಿದೆ.
ಕಳೆದ ಎರಡು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ ಇಂದು ೪೭,೨೩೨ ಕ್ಯೂಸೆಕ್ ನೀರು ಸೇರುತ್ತಿದ್ದು, ಈಗಾಗಲೇ ಭರ್ತಿಯಾಗಿರುವ ಕಾರಣ ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದ್ದು, ೩೨,೧೩೮ ಕ್ಯೂಸೆಕ್ ನೀರು ಹೊರಹರಿಯುತ್ತಿದೆ.
ಕಳೆದ ೨೪ ಗಂಟೆಗಳಲ್ಲಿ ಜಲಾಶಯದ ನೀರಿನ ಮಟ್ಟ ೦.೪೦ ಅಡಿ ಏರಿಕೆಯಾಗಿದೆ. ಗರಿಷ್ಠ ೧೮೧೯ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ೧೮೧೭.೭೦ ಅಡಿ ಮಟ್ಟ ತಲುಪಿದೆ.
ಭಾರೀ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತವು ಮೈದುಂಬಿ ಧುಮ್ಮಿಕ್ಕುತ್ತಿದ್ದು, ಅದರ ಸೊಬಗು ಹೊಸ ರೂಪ ಪಡೆದುಕೊಂಡಿದೆ



