January 11, 2026

ಟೆಂಡರ್ ಬಾಕಿ ಹಣ ಬಿಡುಗಡೆಗೆ ಕಮಿಷನ್ ಕೇಳಿದ ಸೆಕ್ಷನ್ ಆಫಿಸರ್ – 30 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ

ಟೆಂಡರ್ ಬಾಕಿ ಹಣ ಬಿಡುಗಡೆಗೆ ಕಮಿಷನ್ ಕೇಳಿದ ಸೆಕ್ಷನ್ ಆಫಿಸರ್ – 30 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ

ಶಿವಮೊಗ್ಗ: ಸರ್ಕಾರಿ ಕಾಮಗಾರಿಗಳ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೊರಬ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ್ ಎಚ್. ನಾಗರಾಳ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸೋಮವಾರ, ಜೂನ್ 16, 2025ರಂದು ದಾಖಲಾದ ಪ್ರಕರಣದನ್ವಯ ಈ  ಕಾರ್ಯಾಚರಣೆ ನಡೆದಿದೆ.

ಸೊರಬ ತಾಲ್ಲೂಕಿನ ಹಸವಿ ಗ್ರಾಮದ ನಿವಾಸಿ ಮತ್ತು ಪಿಡಬ್ಲ್ಯೂಡಿ ಗುತ್ತಿಗೆದಾರ ಲಿಂಗರಾಜ ಶಿವಪ್ಪ ಉಳ್ಳಾಗಡ್ಡಿ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದ್ದಾರೆ. ಲಿಂಗರಾಜ ಉಳ್ಳಾಗಡ್ಡಿ ಅವರು ಸೊರಬ ತಾಲ್ಲೂಕಿನ ಚೀಲನೂರು ಮತ್ತು ಕಣ್ಣೂರು ಗ್ರಾಮಗಳ ರಸ್ತೆ ಡಾಂಬರೀಕರಣ, ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪಿಎಂಶ್ರೀ ಯೋಜನೆಯಡಿ ಎಣ್ಣೆಕೊಪ್ಪ ಗ್ರಾಮದ ಶಾಲೆ ದುರಸ್ತಿ/ಅಭಿವೃದ್ಧಿ ಸೇರಿದಂತೆ ಒಟ್ಟು 77,59,437/- ರೂಪಾಯಿಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರು.

ಈ ಕಾಮಗಾರಿಗಳ ಹಣ ಮಂಜೂರು ಮಾಡಲು ಸೆಕ್ಷನ್ ಆಫೀಸರ್ ಪರಶುರಾಮ್ ಎಚ್. ನಾಗರಾಳ ಅವರು ಶೇ. 3ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ 1,63,000/- ರೂಪಾಯಿಗಳನ್ನು ಪಡೆದುಕೊಂಡಿದ್ದ ಪರಶುರಾಮ್, ಹೆಚ್ಚುವರಿಯಾಗಿ 70,000/- ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಲಿಂಗರಾಜ ಉಳ್ಳಾಗಡ್ಡಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನನ್ವಯ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರ ಕಲಂ 7(3) (ತಿದ್ದುಪಡಿ ಕಾಯಿದೆ-2018) ಅಡಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು  ಸೋಮವಾರ ಸಂಜೆ, ಶಿರಾಳಕೊಪ್ಪ ನಗರದ ಶಿಕಾರಿಪುರ ರಸ್ತೆಯ ಲಕ್ಷ್ಮೀ ಮೆಡಿಕಲ್ ಸ್ಟೋರ್ ಎದುರು ಗುತ್ತಿಗೆದಾರರಿಂದ 30,000/- ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಪರಶುರಾಮ್ ಎಚ್. ನಾಗರಾಳ ಅವರನ್ನು ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ. ಲಂಚದ ಹಣವನ್ನು ಜಪ್ತಿಪಡಿಸಿಕೊಳ್ಳಲಾಗಿದ್ದು, ಆರೋಪಿ ಸರ್ಕಾರಿ ಅಧಿಕಾರಿಯನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಾಚರಣೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ಎಂ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ರುದ್ರೇಶ್ ಕೆ.ಪಿ. ಅವರು  ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಾದ ಗುರುರಾಜ ಎನ್. ಮೈಲಾರ್, ವೀರಬಸಪ್ಪ ಎಲ್. ಕುಸಲಾಪುರ, ಹಾಗೂ ಸಿಬ್ಬಂದಿಗಳಾದ ಯೋಗೇಶ್ ಜಿ.ಸಿ, ಮಂಜುನಾಥ್ ಎಂ, ಟೀಕಪ್ಪ, ಸುರೇಂದ್ರ ಎಚ್.ಜಿ, ಬಿ.ಟಿ. ಚನ್ನೇಶ್, ದೇವರಾಜ್ ವಿ, ಪ್ರಕಾಶ್ ಬಾರಿಮರದ, ಚಂದ್ರಿಬಾಯಿ, ಪ್ರದೀಪ ಎ.ಎಚ್.ಸಿ, ಜಯಂತ ಎಪಿಸಿ, ಗಂಗಾಧರ ಎಪಿಸಿ, ಆನಂದ ಎ.ಪಿ.ಸಿ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *

Exit mobile version