Breaking
12 Jan 2026, Mon

ತಳಲೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ ವಿ ಗಣಪತಿ ರವರಿಗೆ ಆತ್ಮೀಯ ಬೀಳ್ಕೊಡುಗೆ

ತಳಲೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ ವಿ ಗಣಪತಿ ರವರಿಗೆ ಆತ್ಮೀಯ ಬೀಳ್ಕೊಡುಗೆ

ರಿಪ್ಪನ್ ಪೇಟೆ : : ಗುರುಗಳು ವಿದ್ಯಾರ್ಥಿಗಳಿಗೆ ಅಕ್ಕರೆ ತೋರಿದರೆ ಸಕ್ಕರೆಯ ಜೀವನ ಅವರದಾಗುತ್ತದೆ. ಇದರಿಂದ ಗುರು, ಶಿಷ್ಯರ ಸಂಬಂಧ ಪರಿ ಶುದ್ಧವಾಗಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಹೇಳಿದರು.

ತಳಲೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗಣಪತಿ ಕೆ ವಿ ಅವರಿಗೆ ಶಾಲೆಯ ಶಿಕ್ಷಕ ವೃಂದ, ಶಾಲಾ ಆಡಳಿತ ವರ್ಗ ಮತ್ತು ಸಾರ್ವಜನಿಕರು ಶನಿವಾರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಣಪತಿ ಕೆ ವಿ ಅವರು ದಾನಿಗಳಿಂದ ದೇಣಿಗೆ ಪಡೆದು ಶಾಲೆಯ ಅಭಿವೃದ್ದಿಗೆ ಶ್ರಮಿಸಿದ್ದಾರೆ. ತಳಲೆ ಶಾಲೆಯಲ್ಲಿ ಮೂರು ವರ್ಷಗಳ  ಉತ್ತಮ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣಪತಿ ಕೆ ವಿ ಶಿಕ್ಷಕರು ಕಲಿತ ಋಣವನ್ನು ವಿದ್ಯಾರ್ಥಿಗಳಿಗೆ ಕಲಿಸಿ ತೀರಿಸಬೇಕು. ಶಿಕ್ಷಕರಾದವರು ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿ, ಅದರ ಜ್ಞಾನವನ್ನು ಶಾಶ್ವತವಾಗಿ ಮಸ್ತಕದಲ್ಲಿರಿಸಿಕೊಂಡು, ಕಲಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಅವರನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸುವುದು ಶಿಕ್ಷಕರ ಮೂಲ ಜವಾಬ್ದಾರಿ ಎಂದು ಹೇಳಿದರು.

ವಿದ್ಯೆಗೆ ಜಾತಿ ಮತ್ತು ವರ್ಗ ಎಂಬ ಭೇದವಿಲ್ಲ. ರಾಮಾಯಣ ಕರ್ತೃ ವಾಲ್ಮೀಕಿ, ಮಹಾಭಾರತ ಕರ್ತೃ ವ್ಯಾಸ, ಸರ್ವಜ್ಞ ಮತ್ತು ಕನಕದಾಸರು ಶ್ರೇಷ್ಠರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಸರ್ವರನ್ನೂ ಸಮಾನವಾಗಿ ಕಾಣುವುದೇ ಶಿಕ್ಷಣದ ಗುರಿ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಹೊಸನಗರ ತಾಲೂಕ್ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ ಗಣಪತಿ ಕೆ ವಿ ರವರು ಚೈತನ್ಯಶೀಲ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಾ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಶಿಷ್ಯ ವೃಂದದಲ್ಲಿ ಆಪ್ತ ಶಿಕ್ಷಕರೆಂದು ಗುರುತಿಸಿಕೊಂಡಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಕುಮಾರ್ , ಉಪಾಧ್ಯಕ್ಷೆ ಮಹಾಲಕ್ಷ್ಮಿ , ಗ್ರಾಪಂ ಸದಸ್ಯ ಶ್ರೇಯಸ್ , ಶಿಕ್ಷಕರಾದ ಬೋಜಪ್ಪ , ಕುಬೇರಪ್ಪ , ಶಿಲ್ಪ  ಪೋಷಕರಾದ ಗುರುರಾಜ್ , ಮಹೇಶ್ ಬೆನವಳ್ಳಿ , ಲೋಕೇಶ್ ಹಾಗೂ ಇನ್ನಿತರರಿದ್ದರು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *

Exit mobile version