POSTMANNEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರವೆಸಗಿದಷ್ಟೇ ಅಲ್ಲದೇ ಖಾಸಗಿ ವ್ಯಕ್ತಿಗಳಿಗೆ ಅವಾಚ್ಯ ಪದ ಬಳಕೆ ಮಾಡಿದ್ದು ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಮುಖಂಡರು ದಿಡೀರ್ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಘಟನೆ ನಡೆದಿದೆ.

ಇಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಕರೆದಿದ್ದ ತುರ್ತು ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಿಂದ ಪಂಚಾಯಿತಿ ಬಗ್ಗೆ ಸಾರ್ವಜನಿಕರು ಇಲ್ಲಸಲ್ಲದ ಅಪಹಾಸ್ಯ ಮಾಡುತ್ತಿದ್ದಾರೆಂದು ಹೇಳಿ,  ಧನಲಕ್ಷ್ಮಿ ಗಂಗಾಧರ್ ಅಧ್ಯಕ್ಷ ಸ್ಥಾನಕ್ಕೆ ಅಗೌರವ ತಂದಿದ್ದು ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಭಾತ್ಯಾಗ ಮಾಡಿ ಹೊರ ನಡೆದಿದ್ದಾರೆ ನಂತರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಗಣಪತಿ ರವರು ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿ ನೈತಿಕ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಭೆಯಿಂದ ಹೊರ ಬಂದು ಪಂಚಾಯ್ತಿ ಮುಂಭಾಗ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮಹಾಶಕ್ತಿ ಕೇಂದ್ರದವರು ಪ್ರತಿಭಟನೆಗೆ ಕೈಜೋಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸುಧೀಂದ್ರ ಪೂಜಾರಿ ಇತ್ತೀಚೆಗೆ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರವೊಂದು ನಡೆದಿದ್ದು ಈ ಬಗ್ಗೆ ವಿಡಿಯೋವೊಂದು ಹರಿದಾಡುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಅಧ್ಯಕ್ಷರು ಕೆಲವು ಖಾಸಗಿ ವ್ಯಕ್ತಿಗಳಿಗೆ ದೂರವಾಣಿ ಮೂಲಕ ಅಶ್ಲೀಲವಾಗಿ ಪದ ಬಳಸಿದ್ದಾರೆ ಈ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅವರಿಗೆ ಯಾವುದೇ ನೈತಿಕತೆ ಇಲ್ಲದೇ ಇರುವ ಕಾರಣ ಕೂಡಲೇ ರಾಜೀನಾಮೆ ನೀಡಿ, ವೈರಲ್ ಆಗುತ್ತಿರುವ ಆಡಿಯೋ ಮತ್ತು ವಿಡಿಯೋ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಮುಖಂಡ ಆರ್ ಟಿ ಗೋಪಾಲ್ ಮಾತನಾಡಿ ಪಟ್ಟಣದ ಗ್ರಾಮ ಪಂಚಾಯತ್ ಪಿಡಿಓ ವರ್ಗಾವಣೆಯ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ವೀಡಿಯೋ ಎಲ್ಲಾ ಕಡೆ ಹರಿದಾಡುತಿದ್ದು ಈ ಬಗ್ಗೆ ಅಧ್ಯಕ್ಷೆ ಅವರದೇ ಪಕ್ಷದ ಮುಖಂಡನೊಬ್ಬನಿಗೆ ಅಶ್ಲೀಲವಾಗಿ ” ಸರ್ಕಲ್ ನಲ್ಲಿ ಚಡ್ಡಿ ಬಿಚ್ಚಿ ಮೆಟ್ಟಿನಲ್ಲಿ ಹೊಡೆಯುತ್ತೇನೆ ” ಎಂದಿರುವ ಆಡಿಯೋ ವೈರಲ್ ಆಗಿದ್ದು ಮತ್ತೊಂದು ಆಡಿಯೋ ದಲ್ಲಿ “ಅಪ್ಪನಿಗೆ ಹುಟ್ಟಿದ್ದರೆ” ಎಂಬ ಪದ ಬಳಸುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ ಕೂಡಲೇ ಪೊಲೀಸರು ಸುಮೋಟೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಭ್ರಷ್ಟಾಚಾರ ನಡೆದಿದೆ ಎನ್ನಲಾದ ವೀಡಿಯೋ ಹಾಗೂ ಅಶ್ಲೀಲ ಪದ ಬಳಸಿದ ಆಡಿಯೋ ಬಗ್ಗೆ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪಿ.ರಮೇಶ್, ಜಿ.ಡಿ. ಮಲ್ಲಿಕಾರ್ಜುನ, ಮಂಜುಳಾ, ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ದಾನಮ್ಮ, ವನಮಾಲ, ಸುಂದರೇಶ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್,ಜಿಲ್ಲಾ ಮುಖಂಡರಾದ ಆರ್.ಟಿ.ಗೋಪಾಲ, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ರೇಖಾರವಿ, ಯೋಗೇಂದ್ರಗೌಡ, ಮುರುಳಿಧರ, ರಾಮಚಂದ್ರ,ಸುಧೀರ್ ಪಿ, ಸೀತಮ್ಮ,ಗಣೇಶ್ ಕುಕ್ಕಳಲೆ ಹಾಗೂ ಪಕ್ಷದ ಇನ್ನಿತರ ಮುಖಂಡರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *

Exit mobile version