ತೀರ್ಥಹಳ್ಳಿ ಮೂಲದ ಮಹಿಳಾ ಅಧಿಕಾರಿಯ ಕತ್ತು ಸೀಳಿ ಬರ್ಬರ ಹತ್ಯೆ..!!
  ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ತೀರ್ಥಹಳ್ಳಿ ಮೂಲದ ಮಹಿಳಾ ಅಧಿಕಾರಿಯೊಬ್ಬರನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ.
 ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ(45) ಭೀಕರವಾಗಿ ಹತ್ಯೆಗೀಡಾದವರಾಗಿದ್ದಾರೆ.  ಶನಿವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.
 ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕಿಯಾಗಿದ್ದ ಪ್ರತಿಮಾರವರು ಮೂಲತಃ ತೀರ್ಥಹಳ್ಳಿಯ ಕೊಂಡ್ಲೂರುನವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ದೊಡ್ಡಕಲ್ಲಸಂದ್ರದಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದರು. 
 ಗೋಕುಲ್ ಅಪಾರ್ಟ್ಮೆಂಟ್ನಲ್ಲಿ ಏಕಾಂಗಿಯಾಗಿ ವಾಸವಿದ್ದ ಅವರ ಮನೆಯಲ್ಲಿಯೇ ಅವರನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.
 ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಈ ಭಯಾನಕ ಘಟನೆ ನಡೆದಿದೆ.  ಮಹಿಳಾ ಅಧಿಕಾರಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
 ರಾತ್ರಿ ಪ್ರತಿಮಾ ಅವರಿಗೆ ಅವರ ಸಹೋದರ ಕರೆ ಮಾಡಿದ್ದರು. ಆದ್ರೆ ಅವರು ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆಗೆ ಬಂದಾಗಿ ಘಟನೆ ಬೆಳಕಿಗೆ ಬಂದಿದೆ.
  ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ ಎಂದು ತಿಳಿದು ಬಂದಿದೆ.
 ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ಕೆಲಸದ ನಿಮಿತ್ತ ಪ್ರತಿಮಾ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ 15 ವರ್ಷದ ಮಗ ಕೂಡ ಇದ್ದಾನೆ.
 ಕಾರು ಚಾಲಕ ನಾಪತ್ತೆ:
 ಪ್ರತಿಮಾ ಅವರನ್ನು ನಿನ್ನೆ ಕಚೇರಿಯಿಂದ ಮನೆಗೆ ಕರೆದುಕೊಂಡು ಬಂದಿದ್ದ ಕಾರು ಚಾಲಕ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಘಟನೆ ಬಗ್ಗೆ ಹಲವಾರು ಅನುಮಾನಗಳು ಮೂಡಿವೆ. ಸದ್ಯ ಕೊಲೆ ಮಾಡಿದವರು ಯಾರು ಹಾಗೂ ಕೊಲೆಗೆ ಕಾರಣಗಳೇನು ಎನ್ನುವ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ.
 ಪ್ರತಿಮಾಗೆ ಯಾವುದೇ ಬೆದರಿಕೆ ಇರಲಿಲ್ಲ – ಪ್ರತಿಮಾ ಅತ್ತೆ ಪ್ರತಿಕ್ರಿಯೆ 
 ತೀರ್ಥಹಳ್ಳಿ : ಟಿವಿ ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು. ನಮ್ಮ ಫ್ಯಾಮಿಲಿ ತುಂಬಾ ಚನ್ನಾಗಿ ಇದ್ವಿ. ಹತ್ತುದಿನಗಳ ಹಿಂದೆ ಗೃಹ ಪ್ರವೇಶಕ್ಕೆ ಬಂದಿದ್ದರು. ಒಂದು ವಾರ ತೀರ್ಥಹಳ್ಳಿಯಲ್ಲೇ ಇದ್ದರು. ಗೃಹಪ್ರವೇಶ ಮಾಡಿ ಬೆಂಗಳೂರಿಗೆ ತೆರಳಿದ್ದರು. ಪ್ರತಿಮಾ ಅವರ ಅಣ್ಣ ಅಳುತ್ತಾ ಬಂದಮೇಲೆ ನಮಗೆ ವಿಚಾರ ಗೊತ್ತಾಯಿತು. ಅವಳದು ತುಂಬಾ ನಗುತ್ತಾ ಇರುವ ಸ್ವಾಭಾವ ಎಂದು ಪ್ರತಿಮಾ ಅತ್ತೆ ಪ್ರೇಮಾ ಪ್ರತಿಕ್ರಿಯೆ ನೀಡಿದ್ದಾರೆ.
 ತೀರ್ಥಹಳ್ಳಿ ಮೂಲದ ಬೆಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶಿವಮೊಗ್ಗ ಸುದ್ದಿ ಮಾಧ್ಯಮದ ಜೊತೆ ಮಾತನಾಡಿ ನಿನ್ನೆ ಕೂಡ ಪ್ರತಿಮಾ ಕರೆ ಮಾಡಿದ್ದರು. ಅವರಿಗೆ ಯಾವುದೇ ಬೆದರಿಕೆ ಇರಲಿಲ್ಲ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ಪ್ರತಿಮಾ ವಾಸವಾಗಿದ್ದರು ಎಂದಿದ್ದಾರೆ.
 ಪ್ರತಿಮಾ ಅವರ ಪತಿ ರಾಮಣ್ಣ ಕೃಷಿಕರಾಗಿದ್ದು ಮಗ ಸಹ್ಯಾದ್ರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.ಪಟ್ಟಣದ ಇಂದಾವರದ ತುಂಗಾ ಕಾಲೇಜಿನ ಸಮೀಪದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಹೊಸಮನೆ ಗೃಹ ಪ್ರವೇಶ ನಡೆಸಿದ್ದರು. ಪ್ರತಿಮಾ ಅವರ ಹತ್ಯೆಯಾಗಿರುವುದು ಆಘಾತ ತಂದಿದೆ ಎಂದು ಕುಟುಂಬಸ್ಥರು ತಿಳಿಸಿದರು.
 


