Headlines

ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ : ಪಿಎಸ್‌ಐ ಪ್ರವೀಣ್ | ದಲಿತರ ಕುಂದುಕೊರತೆ ಸಭೆ|Rpet

ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ; ಪಿಎಸ್‌ಐ ಪ್ರವೀಣ್

ರಿಪ್ಪನ್‌ಪೇಟೆ : ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕು,ರಕ್ತದ ಅಗತ್ಯತೆ ಮನಗಾಣುವ ಮೂಲಕ ಯುವ ಜನತೆ ರಕ್ತದಾನದಂತಹ ಮಹತ್ಕಾರ್ಯಕ್ಕೆ ಹೆಚ್ಚು ಹೆಚ್ಚು ಕೈ ಜೋಡಿಸಬೇಕು ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣಾಧಿಕಾರಿ ಎಸ್ ಪಿ ಪ್ರವೀಣ್ ಹೇಳಿದರು.


ಜಿಲ್ಲಾ ಮೆಗ್ಗಾನ್ ಸರಕಾರಿ ಆಸ್ಪತ್ರೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ರಿಪ್ಪನ್‌ಪೇಟೆಯ ಶ್ರೀ ನಂದಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ರಕ್ತದಾನ ಮಾಡುವ ಮೂಲಕ ವ್ಯಕ್ತಿ ಸಂಭವನೀಯ ಹೃದಯಾಘಾತ, ರಕ್ತದೊತ್ತಡ, ಲಿವರ್ ಸಮಸ್ಯೆ ಸೇರಿದಂತೆ ಹಲವು ಬಗೆಗೆ ರೋಗಗಳಿಂದ ಮುಕ್ತನಾಗಲು ಸಾಧ್ಯವಿದ್ದು, ಇದಕ್ಕೆ ನಿರಂತರ ರಕ್ತದಾನವೇ ತಕ್ಕ ಉತ್ತರವಾಗಿದೆ ಎಂದರು.

ರಿಪ್ಪನ್‌ಪೇಟೆ ಶ್ರೀ ನಂದಿ ಹಾಸ್ಪಿಟಲ್‌ನ ಡಾ. ವೀರೇಶ್ ಮಾತನಾಡಿ ಯಾವುದೇ ಅಪಘಾತ, ಅನಾಹುತದಂತಹ ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ರಕ್ತದ ಅಗತ್ಯತೆ ಅನಿವಾರ್ಯವಾಗಿದೆ. ಓರ್ವ ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಕನಿಷ್ಟ ಎರಡು ಬಾರಿ ರಕ್ತದಾನ ಮಾಡಬಹುದು. ಇದರಿಂದ ಜೀವ ಉಳಿಸಿದ ಸಾರ್ಥಕ ಭಾವ ಹೊಂದಬಹುದು. ಯುವಸಮೂಹ ರಕ್ತದಾನ ಕುರಿತು ಯಾವ ಹಿಂಜರಿಕೆ ಹೊಂದದೆ ರಕ್ತದಾನಕ್ಕೆ ಮುಂದಾಗಬೇಕು ಎಂದು  ತಿಳಿಸಿದರು.


38 ಬಾರಿ ರಕ್ತದಾನ ಮಾಡಿರುವ, ಪರಿಸರಾಸಕ್ತ ಹೆಡ್ ಕಾನ್‌ಸ್ಟೇಬಲ್ ಹಾಲೇಶಪ್ಪ ಮಾತನಾಡಿ, ಪೊಲೀಸರ ಆರೋಗ್ಯ ಸುಸ್ಥಿತಿ ಕಾಯ್ದುಕೊಳ್ಳುವ ಮೂಲಕ ಸಮಾಜದ ಅಗತ್ಯತೆಯನ್ನು ಪೂರೈಸುವುದು ಈ ಶಿಬಿರದ ಮೂಲ ಉದ್ದೇಶವಾಗಿದ್ದು, ಇಲಾಖೆಯ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಈ ಕಾರ್ಯಕ್ರಮಕ್ಕಿದೆ ಎಂದರು.

ಆಸ್ಪತ್ರೆಯ ಮಾಲೀಕರಾದ ಗರ್ತಿಕೆರೆ ಸಚಿನ್ ಸಹೋದರರು, ಡಾ. ಸುಲೇಖಾ, ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ವಿಕ್ಟರ್, ಗ್ರಾ.ಪಂ. ಸದಸ್ಯ ನಿರೂಪ್, ಗರ್ತಿಕೆರೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಘವೇದ್ರ. ಸಮಾಜ ಸೇವಕಿ ಶೀಲಾ ಸೇರಿದಂತೆ ಹಲವರು ಸಾರ್ವಜನಿಕರು ಶಿಬಿರದಲ್ಲಿ ಉಪಸ್ಥಿತರಿದ್ದು, ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆ ನೀಡಿದರು.

ಒಟ್ಟಾರೆ 60 ಯೂನಿಟ್ ರಕ್ತ ಸಂಗ್ರಹವಾಯಿತು. ತೀರ್ಥಹಳ್ಳಿ ಡಿವೈಎಸ್‌ಪಿ ಅವರ ಮಾರ್ಗದರ್ಶನ, ಪಿಎಸ್‌ಐ ಪ್ರವೀಣ್ ನೇತೃತ್ವ ಹಾಗೂ ಹೆಡ್‌ ಕಾನ್ಸ್ ಟೇಬಲ್ ಹಾಲೇಶಪ್ಪ ಅವರ ಮುಂದಾಳತ್ವದಲ್ಲಿ ಈ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪೂರ್ಣಗೊಂಡಿತು.

ದಲಿತರ ಕುಂದುಕೊರತೆ ಸಭೆ

ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ದಲಿತರ ಕುಂದುಕೊರತೆಗಳ ಸಭೆ ನಡೆಯಿತು.


ಈ ಸಂಧರ್ಭದಲ್ಲಿ ಮಾತನಾಡಿದ ಪಿಎಸ್ ಐ ಎಸ್ ಪಿ ಪ್ರವೀಣ್ ದಲಿತ ಸಮುದಾಯದ ಕುಂದುಕೊರತೆ ನಿವಾರಿಸುವ ಸಲುವಾಗಿ ದಲಿತ ಸಭೆಗಳನ್ನು ನಡೆಸಲಾಗುತ್ತಿದೆ. ದೇವದಾಸಿ ಪದ್ಧತಿ, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು,ದಲಿತ ಮಕ್ಕಳಲ್ಲಿ ಶಿಕ್ಷಣದ ಕೊರತೆ ಕಂಡು ಬರುತ್ತಿದ್ದು ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ಶಿಕ್ಷಣದ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು.

ಇದೇ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಠಾಣೆಯ ನೂತನ ಪಿಎಸ್ ಐ ಎಸ್ ಪಿ ಪ್ರವೀಣ್ ರನ್ನು ದಲಿತ ಮುಖಂಡರು ಆತ್ಮೀಯವಾಗಿ ಅಭಿನಂದಿಸಿದರು.

ಈ ಸಭೆಯಲ್ಲಿ ದಲಿತ ಮುಖಂಡರಾದ ಸೋಮೇಶ್ವರ ಕಲ್ಲೂರು, ರಾಘವೇಂದ್ರ ಚಿಪ್ಲಿ ,ವೆಂಕಟಪ್ಪ ಕುಕ್ಕಳಲೆ , ಈಶ್ವರ ಮಸರೂರು , ಪ್ರಶಾಂತ್ ,ಮಧು ,ಗಣೇಶ್ , ಅಣ್ಣಪ್ಪ , ಸತೀಶ್ ,ರವಿಚಂದ್ರ ಮತ್ತು ಮಂಜು ಇದ್ದರು

Leave a Reply

Your email address will not be published. Required fields are marked *

Exit mobile version