ಧರ್ಮದ ಪರಿಪಾಲನೆಯಲ್ಲಿ ಶ್ರದ್ಧೆ ಮುಖ್ಯ – ಮೂಲೆಗದ್ದೆ ಶ್ರೀ
ರಿಪ್ಪನ್ ಪೇಟೆ : ಸತ್ಯ, ಸದ್ಭಾವನೆ ಸಂಯಮ ಸಾಕ್ಷಾತ್ಕಾರ ಸರ್ವ ಸಿದ್ದಿ ಹಾಗೂ ಮೋಕ್ಷ ಧರ್ಮದ ಹಾದಿಯಾಗಿದೆ ಇಂತಹ ಧರ್ಮ ಪರಿಪಾಲನೆಯಲ್ಲಿ ಶ್ರದ್ಧಾ ಭಕ್ತಿ ಮುಖ್ಯವೆಂದು ಮೂಲೆಗದ್ದೆ ಮಠದ ಪೀಠಾಧಿಕಾರಿ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಆನ್ನಪೂರ್ಣೇಶ್ವರಿ ಆಮ್ಮನವರ ದೇವಸ್ಥಾನದ 6 ನೇ ವರ್ಷದ ಪ್ರತಿಷ್ಠ ವರ್ಧಂತ್ಯುತ್ಸವ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇವಸ್ಥಾನ ಮಂದಿರಗಳಲ್ಲಿ ಆಯೋಜಿಸುವ ಸಾಮೂಹಿಕ ಧಾರ್ಮಿಕ ಆಚರಣೆಗಳಿಂದ ಪರಸ್ಪರ ಬಾಂಧವ್ಯಗಳು ವೃದ್ಧಿಯಾಗಿ ಶಾಂತಿ ನೆಮ್ಮದಿ ಕಾಣಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಭಾರತೀಯ ಸಂಸ್ಕೃತಿ- ಸಂಸ್ಕಾರ ಅರಿತು ನಡೆಯುವಲ್ಲಿ ಯುವ ಜನತೆ ಮುಂದಾಗಬೇಕು ಎಂದರು.
ವಾರ್ಷಿಕ ವರ್ಧಂತ್ಯೋತ್ಸವದ ಅಂಗವಾಗಿ ಸಿದ್ಧಿವಿನಾಯಕ ಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಎರಡು ದಿನಗಳ ಕಾಲ ಶಿವಮೊಗ್ಗದ ವಸಂತ ಭಟ್ ಪೌರೋಹಿತ್ಯದಲ್ಲಿ ದೇವಸ್ಥಾನದ ಅರ್ಚಕರಾದ ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಹೋಮ ಹವನಗಳು ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಇ.ಈಶ್ವರ ಶೆಟ್ಟಿ ಅಧ್ಯಕ್ಷೆತೆ ವಹಿಸಿದ್ದರು.
ಉಪ ತಹಶೀಲ್ದಾರ್ ಹುಚ್ಚರಾಯಪ್ಪ,ಮಾಜಿ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಗಣೇಶ್ ಕಾಮತ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್,ಗಣೇಶ್ ಕಾಮತ್ ಸೇರಿದಂತೆ ದೇವಸ್ಥಾನ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು.