Headlines

ಮನಸ್ಸುಗಳನ್ನು ಕಟ್ಟುವ ಪ್ರಕ್ರಿಯೆಯೇ ರಂಗಭೂಮಿ – ಡಾ. ರತ್ನಾಕರ ಸಿ ಕುನುಗೋಡು|Ripponpet news

ಮನಸ್ಸುಗಳನ್ನು ಕಟ್ಟುವ ಪ್ರಕ್ರಿಯೆಯೇ ರಂಗಭೂಮಿ- ಡಾ. ರತ್ನಾಕರ ಸಿ ಕುನುಗೋಡು.

ರಿಪ್ಪನ್ ಪೇಟೆ :  ಎಲ್ಲ ಭೇದಗಳನ್ನು ಅಳಿಸಿ ಸಮತೆಯ ಕಣ್ಣಲ್ಲಿ ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವಜನತೆಯನ್ನು ರೂಪಿಸುವ ತುರ್ತು ಇದೆ ಎಂದು ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಸಿ ಕುನುಗೋಡು ಹೇಳಿದರು.




ದಿ. ರೇಣುಕಪ್ಪಗೌಡ ಪ್ರತಿಷ್ಠಾನ, ಮಲೆನಾಡು ಕಲಾತಂಡ ಮಸರೂರು ಹಾಗ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ  ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ’ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ’ ‘ ರಂಗಭೂಮಿ ಅಂದು ಮತ್ತು ಇಂದು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ; ಆದಿಮ ರಂಗ ಕ್ರಿಯೆಗಳು ಹಸಿವು, ಫಲವತ್ತತೆ, ಚರಿತ್ರೆಯ ಪ್ರಸರಣ , ಆರಾಧನೆ ಹಾಗೂ ಆಧ್ಯಾತ್ಮಿಕತೆಯ ಅಂಶಗಳನ್ನು ಒಳಗೊಂಡ ಪ್ರಕ್ರಿಯೆಯಾಗಿ ಮನುಕುಲದ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿವೆ.  ರಂಗಭೂಮಿ ಯ ಪರಿಕಲ್ಪನೆ ವಿಶಾಲವಾಗಿದ್ದು ಇಂದು ನಾನಾ ರೂಪಾಂತರಗಳ ಮೂಲಕ ತನ್ನ ಜೀವಂತಿಕೆಯನ್ನು ಕಾಪಿಟ್ಟುಕೊಂಡಿದೆ ಎಂದರು.




ಹಿರಿಯ ಸಾಹಿತಿ ಅ. ಹ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಂಗಕರ್ಮಿ ಗಣೇಶ ಕೆಂಚನಾಲ ಪ್ರಾಸ್ತಾವಿಕ ಮಾತನಾಡಿ; ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು ಪೋಷಕರು ತಮ್ಮ ಮಕ್ಕಳನ್ನು  ಶಿಬಿರಕ್ಕೆ ಸೇರಿಸುವ ಮೂಲಕ ರಂಗಭೂಮಿಯ ಜೀವಂತಿಕೆಗೆ ಸಹಕರಿಸುವಂತೆ ಮನವಿ ಮಾಡಿದರು.

ಕು. ಸಂಗೀತಾ ಅವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಲಕ್ಷ್ಮೀ ಭದ್ರಾವತಿ ಅವರು ಕಲ್ಯಾಣ ಕ್ರಾಂತಿಯ ತುಣುಕನ್ನು ಏಕವ್ಯಕ್ತಿ ಪ್ರದರ್ಶನ ನೀಡಿದರು.




ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಹರೀಶ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Exit mobile version