ತೀರ್ಥಹಳ್ಳಿ : ಪಟ್ಟಣದ ಕುವೆಂಪು ವೃತ್ತದಲ್ಲಿ ಮಹಿಳೆಯರಂತೆ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಮತ್ತು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಈತನ ಹೆಸರು ರಾಜಾ ಎನ್ನಲಾಗಿದ್ದು ಸುಮಾರು 35 ವರ್ಷ ವಯಸ್ಸಿನವನು. ತಾನು ರಾಯಚೂರಿನಿಂದ ಬಂದವನು ಎಂದು ಪೋಲಿಸರ ಮುಂದೆ ಹೇಳಿಕೊಂಡಿದ್ದಾನೆ.
ಮಂಗಳವಾರ ಬೆಳಿಗ್ಗೆ ಕುವೆಂಪು ವೃತ್ತದಲ್ಲಿ ಬುರ್ಖಾ ಧರಿಸಿದ್ದ ಈತನ ವೇಷ ಭೂಷಣ ವರ್ತನೆಯನ್ನು ನೋಡಿ ಸಾರ್ವಜನಿಕರು ಅನುಮಾನದಿಂದ ಪೋಲೀಸರಿಗೆ ಮಾಹಿತಿಯನ್ನು ನೀಡಿ ಆತನನ್ನು ಪೊಲೀಸರಿಗೊಪ್ಪಿಸಿದ್ದರು.
ರಾಜಾನನ್ನು ಠಾಣೆಗೆ ಕರೆದೊಯ್ದ ಪೋಲೀಸರು ಸಮಗ್ರ ತನಿಖೆ ನಡೆಸಿದ ನಂತರ ಮಾನಸಿಕವಾಗಿಯೂ ಅಸ್ವಸ್ಥನಂತೆ ಕಂಡು ಬಂದ ಕಾರಣ ಆತನನ್ನು ಆತನ ಊರಾದ ರಾಯಚೂರಿಗೆ ಕಳುಹಿಸಿದ್ದಾರೆ.