ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯ ಹಿನ್ನಲೆಯಲ್ಲಿ ಸಾಗರದ ಯುವಕನೊಬ್ಬ ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಸಾಗರ ಸಮೀಪದ ಅದರಂತೆ ಗ್ರಾಮದ ಸಿವಿಲ್ ಇಂಜಿನಿಯರ್ ಮಿಥಿನ್ (26) ಎಂಬುವರು ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು ಯುವಕನ ಮನೆಯಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ.
ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಮಿಥಿನ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.ಆ ಮನೆಯ ಕಾಂಪೌಂಡ್ ರಾಜಾಕಾಲುವೆಯ ಮೇಲೆ ಇದ್ದು ನಿನ್ನೆ ರಾತ್ರಿ 11 ಗಂಟೆಗೆ ಬಾಡಿಗೆ ಮನೆಯ ಕಾಂಪೌಂಡ್ ರಾಜಾಕಾಲುವೆಯಲ್ಲಿ ಹರಿದು ಬಂದ ನೀರಿನ ರಭಸಕ್ಕೆ ಕುಸಿದುಬಿದ್ದಿದೆ.
ಕಾಂಪೌಂಡ್ ಕುಸಿದು ಬಿದ್ದ ಶಬ್ದ ಕೇಳಿ ಹೊರಬಂದ ಮಿಥಿನ್ ಬೈಕ್ ಗಳು ಕೊಚ್ಚಿಕೊಂಡು ಹೋಗುತ್ತಿರುವುದನ್ನ ಗಮನಿಸಿದ್ದಾನೆ. ರಾಜಾ ಕಾಲುವೆಯ ಅಂಚಿನಲ್ಲಿ ನಿಂತು ಬೈಕ್ ನ್ನು ಹಿಡಿಯಲು ಮುಂದಾದಾಗ ಮಿಥಿನ್ ನಿಂತಿದ್ದ ನೆಲವೇ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.
ಇದರಿಂದ ಮಿಥಿನ್ ನೀರಿನ ರಬಸದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸಾಗರದ ಅದರಂತೆ ಗ್ರಾಮದಲ್ಲಿ ಮಿಥಿನ್ ಕೊಚ್ಚಿಕೊಂಡು ಹೋಗಿರುವ ವಿಷಯವನ್ನ ತಿಳಿದು ತಂದೆ ಅಶೋಕ್ ಕುಮಾರ್ ಮತ್ತು ತಾಯಿ ಮಂಜುಳರಿಗೆ ಆಘಾತವಾಗಿದೆ.ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.