ಲೈಂಗಿಕ ಕಿರುಕುಳದ ಆರೋಪ: ಸಹ ಪ್ರಾಧ್ಯಾಪಕನನ್ನು ಬಂಧಿಸಿ, ಕ್ರಮ ಜರುಗಿಸಲು ಆಗ್ರಹ
ಶಿವಮೊಗ್ಗ: ನಗರದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ|| ಅಶ್ವಿನ್ ಹೆಬ್ಬಾರ್ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಪೀಪಲ್ ಲಾಯರ್ಸ್ ಗೀಲ್ಡ್‌ನ ಮುಖ್ಯಸ್ಥ ಕೆ.ಪಿ. ಶ್ರೀಪಾಲ್ ಆಗ್ರಹಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಾಗುತ್ತಿದ್ದಂತೆ ಡಾ|| ಅಶ್ವಿನ್ ಹೆಬ್ಬಾರ್ ನಾಪತ್ತೆಯಾಗಿದ್ದಾರೆ. ಆತನನ್ನು ಹುಡುಕಿ ಬಂಧಿಸಬೇಕು. ಪೊಲೀಸರು ಕೂಡ ಸುಮ್ಮನಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಿಮ್ಸ್ ಆಡಳಿತ ಮಂಡಳಿಯಾಗಲಿ, ಅಲ್ಲಿನ ಅಧೀಕ್ಷಕ ಡಾ|| ವಿರುಪಾಕ್ಷಪ್ಪ ಅವರಾಗಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಿರುಕುಳಕ್ಕೆ ಒಳಗಾದ ಮೆಡಿಕಲ್ ವಿದ್ಯಾರ್ಥಿನಿ ಐದು ದಿನದ ಹಿಂದೆಯೇ ದೂರು ನೀಡಿದ್ದಾಳೆ. ಆದರೂ ಯಾವುದೇ ಕ್ರಮವನ್ನು ಜರಯಿಸಿಲ್ಲ. ಪೊಲೀಸರು ಎಫ್ ಐಆರ್ ಮಾಡಿದ್ದರೂ ಕೂಡ ಇದೂವರೆಗೆ ಆತನನ್ನು ಬಂಧಿಸಿಲ್ಲ. ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಮಧ್ಯಪ್ರವೇಶ ಮಾಡಿ, ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಲಾಯರ್ಸ್ ಗೀಲ್ಡ್ ಮೂಲಕವೇ ಹೈಕೋರ್ಟ್‌ನಲ್ಲಿ ಸುಮೋಟೋ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸಣ್ಣಪುಟ್ಟ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಈ ವೈದ್ಯರ ಬಂಧನಕ್ಕೆ ವಿಳಂಬವೇಕೆ ಎಂದು ಪ್ರಶ್ನಿಸಿದ ಅವರು, ನಿರ್ದೇಶಕ ಸೇರಿ ಇಡೀ ಮೆಗ್ಗಾನ್ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿಡಬೇಕು. ಈ ವೈದ್ಯ ವಿದ್ಯಾರ್ಥಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣ ಅವರಿಗೆ ಮೊದಲಿನದಲ್ಲ. ಕಾಶ್ಮೀರ ಮೂಲದ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ. ಅದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದೆ. ನ್ಯಾಯಾಲಯದಿಂದ ಸದ್ಯಕ್ಕೆ ತಡೆಯಾಜ್ಞೆ ಇದ್ದರೂ ಕೂಡ ಪ್ರಕರಣ ಇತ್ಯರ್ಥವಾಗಿಲ್ಲ. ಇಷ್ಟಾದರೂ ಕೂಡ ಈಗ ಮತ್ತೆ ಅದೇ ರೀತಿಯ ವರ್ತನೆಯನ್ನು ಆತ ತೋರಿಸಿದ್ದಾನೆ ಎಂದು ಹೇಳಿದರು.
ವಕೀಲರಾದ ಷಹರಾಜ್ ಸಿದ್ದಿಕಿ, ವಿಜಯ್ ಟಿ. ಉಪಸ್ಥಿತರಿದ್ದರು.