ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಖಾದ್ರಿ ಅ.30ರಂದು ಬುಧವಾರ ನಾಮಪತ್ರವನ್ನು ಹಿಂಪಡೆಯಲಿದ್ದಾರೆ. ಅವರ ಅರ್ಹತೆಗೆ ತಕ್ಕಂತೆ ಪಕ್ಷವು ಅಧಿಕಾರ ನೀಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಜೊತೆ ಆಗಮಿಸಿದ ಅಜ್ಜಂಪೀರ್ ಖಾದ್ರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಖಾದ್ರಿ ನಮ್ಮ ಜೊತೆಯಲ್ಲಿದ್ದಾರೆ. ಅವರ ದುಃಖ ದುಮ್ಮಾನಗಳನ್ನು ನಮ್ಮ ಬಳಿ ಚರ್ಚೆ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಅವರಿಗೆ ನೀಡಿರುವ ಭರವಸೆಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಖಾದ್ರಿ ಅವರ ಬಳಿ ಗೌಪ್ಯವಾಗಿ ಮಾತನಾಡಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಖಾದ್ರಿ ಅವರಿಗೆ ಕಳೆದ ಚುನಾವಣೆಯಲ್ಲಿಯೇ ಟಿಕೆಟ್ ನೀಡಬೇಕಾಗಿತ್ತು, ಕಾರಣಾಂತರಗಳಿಂದ ಯಾಸಿರ್ ಪಠಾಣ್ ಅವರಿಗೆ ನೀಡಲಾಗಿತ್ತು. ಇವರ ತ್ಯಾಗವನ್ನು ಪಕ್ಷ ಮರೆಯುವುದಿಲ್ಲ. ಅವರಿಗೆ ಉತ್ತಮ ಸ್ಥಾನವನ್ನು ನೀಡುವುದಾಗಿ ಹಿಂದೆಯೂ ಹೇಳಿದ್ದೆವು, ಈಗಲೂ ಹಾಗೂ ಮುಂದಕ್ಕೂ ಹೇಳುತ್ತೇವೆ ಎಂದು ಅವರು ತಿಳಿಸಿದರು.
ಖಾದ್ರಿ ಪ್ರಾಮಾಣಿಕ ವ್ಯಕ್ತಿ: ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾದ ಖಾದ್ರಿ ಅವರು ಜಾತ್ಯತೀತ ತತ್ವಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ನಿಲುವಿಗೆ ಬದ್ಧರಾಗಿದ್ದಾರೆ. ಸಚಿವರಾದ ಝಮೀರ್ ಅಹ್ಮದ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್ ಹಾಗೂ ಇಸ್ಮಾಯಿಲ್ ತಮಟಗಾರ್ ಅವರೆಲ್ಲಾ ಸೇರಿ ಖಾದ್ರಿ ಮನವೊಲಿಸಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಳಿಯೂ ಟಿಕೆಟ್ ಹಿಂಪಡೆಯುವ ವಿಚಾರವಾಗಿ ಚರ್ಚೆ ನಡೆಸಿದ್ದರು ಎಂದು ಶಿವಕುಮಾರ್ ಹೇಳಿದರು.
ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ: ನಾಳೆ ಶಿಗ್ಗಾಂವಿ ಕ್ಷೇತ್ರದ ಮುಖಂಡರ ಬಳಿ ಚರ್ಚೆ ಮಾಡಲಾಗುವುದು. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆ. ಖಾದ್ರಿ ಜನತಾದಳದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ನಂತರ ಮಾತನಾಡಿದ ಅಜ್ಜಂಪೀರ್ ಖಾದ್ರಿ, ಈ ಬಾರಿ ಟಿಕೆಟ್ ನೀಡಿದರೆ ನಾನೇ ಗೆಲ್ಲುತ್ತೇನೆ, ಟಿಕೆಟ್ ನೀಡಿ ಎಂದು ಉಭಯ ನಾಯಕರ ಬಳಿಯೂ ನಾನು ಮತ್ತೊಮ್ಮೆ ಮನವಿ ಮಾಡಿದೆ. ಇದು ನಮ್ಮ ತೀರ್ಮಾನವಲ್ಲ, ಹೈಕಮಾಂಡ್ ತೀರ್ಮಾನ ಎಂದು ಹೇಳಿದರು. ನಾನು ಪಕ್ಷದ ತೀರ್ಮಾನವನ್ನು ಕ್ಷೇತ್ರದ ಕಾರ್ಯಕರ್ತರ ಬಳಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ. ಮೂರು ಬಾರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದೇನೆ. ಮೊದಲ ಬಾರಿಗೆ ಜನತಾದಳದಿಂದ ಸಿದ್ದರಾಮಯ್ಯ ನನಗೆ ಮೊದಲ ಬಾರಿಗೆ ಟಿಕೆಟ್ ನೀಡಿದ್ದರು. ಪ್ರಸ್ತುತ ನನಗೆ ವ್ಯಕ್ತಿಗಿಂತ, ಕಾಂಗ್ರೆಸ್ ಪಕ್ಷವೇ ಮುಖ್ಯ. ಕ್ಷೇತ್ರದಲ್ಲಿ ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು ಎಂದು ಅವರು ತಿಳಿಸಿದರು.
ಇಂದು ಬೆಳಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದಾಗ, ಖಾದ್ರಿ ನೀನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಿನಗೆ ರಕ್ಷಣೆಯನ್ನು ಕೊಡುವುದು ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿ. ಪಕ್ಷವನ್ನು ಗೆಲ್ಲಿಸುವ ಹೊಣೆ ಝಮೀರ್, ನಸೀರ್, ಹಾರಿಸ್ ಸೇರಿದಂತೆ ಎಲ್ಲರ ಮೇಲಿದೆ ಎಂದು ತಿಳಿಸಿದರು ಎಂದು ಅಜ್ಜಂಪೀರ್ ಖಾದಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್, ಶಾಸಕ ಎನ್.ಎ.ಹಾರಿಸ್, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಉಪಸ್ಥಿತರಿದ್ದರು.