ಮುಖ್ಯ ಶಿಕ್ಷಕಿ ಬೀಗ ಹಾಕಿಕೊಂಡು ಗೈರು – ಬಾಗಿಲು ತೆರೆಯದ ಕಾರಣ ಮಕ್ಕಳೆಲ್ಲಾ ಮನೆಗೆ ವಾಪಸ್
ಭದ್ರಾವತಿ : ತಾಲೂಕಿನ ಹುಣಸೇಕಟ್ಟೆ ಗ್ರಾಮದ ಗೌಳಿಗರ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಮುಖ್ಯ ಶಿಕ್ಷಕಿ ಅನುಪಮಾ ಶಾಲೆಯ ಬೀಗದ ಕೈ ತೆಗೆದುಕೊಂಡು ಹೋದವರು ಬುಧವಾರ ಶಾಲೆಗೆ ಬಾರದೆ ಗೈರಾಗಿದ್ದಾರೆ. ಸಹ ಶಿಕ್ಷಕಿಯರಿಗೆ ಅಥವಾ ಎಸ್ಡಿಎಂಸಿ ಯಾರಿಗೂ ಹೇಳದೆ ಹೋಗಿ ಬೀಗದ ಕೈ ಇಲ್ಲದೆ ಶಾಲೆ ಬಂದ್ ಆಗಿರುವ ಘಟನೆ ಬುಧವಾರ ನಡೆದಿದೆ.
ಶಾಲೆಗೆ ಬಂದ ಮಕ್ಕಳು ಶಾಲೆಗೆ ಬೀಗ ಜಡಿದಿರುವುದನ್ನು ಕಂಡು ಕೆಲ ಕಾಲ ಆಟವಾಡುತ್ತಾ ಕಾಲ ಕಳೆದಿದ್ದಾರೆ. ತಕ್ಕ ಸಮಯಕ್ಕೆ ಸಹ ಶಿಕ್ಷಕಿ ಜ್ಯೋತಿ ಎಂಬುವರು ಬಂದಿದ್ದಾರೆ. ಮುಖ್ಯ ಶಿಕ್ಷಕರು ಈಗ ಬರಬಹುದು ಆಗ ಬರಬಹುದು ಎಂದು ಕಾದು ಕುಳಿತರು. ಈ ವಿಚಾರವು ಗ್ರಾಮ ಪಂಚಾಯಿತಿ ಮತ್ತು ಎಸ್ಡಿಎಂಸಿ ಸದಸ್ಯರಿಗೆ ತಿಳಿದು ಸಿಆರ್ಪಿ ಪ್ರಿಯಾಂಕ, ಬಿಆರ್ಸಿ ಶಿಕ್ಷಣ ಸಮನ್ವಯಾಧಿಕಾರಿ ಪಂಚಾಕ್ಷರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಅವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ಗ್ರಾಮಸ್ಥರು ಮತ್ತು ಪೋಷಕರು ಶಿಕ್ಷಕಿಯರ ವರ್ತನೆಯನ್ನು ಖಂಡಿಸಿದ್ದಾರೆ.
ನಂತರ ಗ್ರಾಮ ಪಂಚಾಯಿತಿ ಸದಸ್ಯ ಗಂಗಾರಾಮ್ ಮತ್ತು ಗ್ರಾಮದ ಮುಖಂಡರು ಅನೇಕರು ಸಿಆರ್ಪಿ ಪ್ರಿಯಾಂಕ ಅವರ ಬಳಿ ಮಾತನಾಡಿದಾಗ ಈ ವಿಚಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಎಷ್ಟು ಹೊತ್ತು ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೋಷಕರು ಶಿಕ್ಷಣ ಇಲಾಖೆಯನ್ನು ಶಪಿಸುತ್ತಾ ಮಕ್ಕಳನ್ನು ಮನೆಗೆ ಕರೆದೊಯ್ದರು. ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ವಿಷಯ ಮುಟ್ಟಿಸಿದರೂ ಸ್ಥಳಕ್ಕಾಗಮಿಸಿ ಪರ್ಯಾಯ ವ್ಯವಸ್ಥೆ ಮಾಡುವುದನ್ನು ಬಿಟ್ಟು ತೆಪ್ಪಗಾಗಿದ್ದಾರೆ. ಈ ಹಿಂದೆಯೂ ಶಾಲೆಯಲ್ಲಿ ಶಿಕ್ಷಕಿಯರ ಮದ್ಯೆ ಪರಸ್ಪರ ವೈಮನಸ್ಸಿನಿಂದ ಶಾಲಾ ವಾತಾವರಣ ಹಾಳಾಗುತ್ತಿದೆ. ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರೂ ಇಂದಿಗೂ ಕ್ರಮ ಜರುಗಿಸಿಲ್ಲ. ಶಿಕ್ಷಕಿಯರಿಗೆ ಬುದ್ದಿವಾದ ಹೇಳಿಲ್ಲ. ಸಭೆ ಕರೆದಿಲ್ಲ ಎಂದು ದೂರಿದ್ದಾರೆ.




