ಸಾಗರದಲ್ಲಿ ಆಣೆ ಪ್ರಮಾಣದ ರಾಜಕೀಯ ಮೇಲಾಟ ತಾರಕಕ್ಕೇರಿದ್ದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಶಾಸಕ ಹಾಲಪ್ಪ ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ, ತಾಕತಿದ್ದರೆ ಕಮೀಷನ್ ಪಡೆದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲಿಗೆ ಇಂದು ಪ್ರತಿಕ್ರಿಯಿಸಿರುವ ಶಾಸಕ ಹರತಾಳು ಹಾಲಪ್ಪ ಪ್ರಮಾಣ ಮಾಡುವ ದಿನಾಂಕವನ್ನು ಸಹ ಘೋಷಿಸಿದ್ದಾರೆ.
ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ತಾಕತ್ತಿದ್ದರೆ ಹಾಲಪ್ಪನವರು ಕಮೀಷನ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಸವಾಲು ಹಾಕಿದ್ದರು.
ಇದೀಗ ಈ ಸವಾಲನ್ನು ಸ್ವೀಕರಿಸಿರುವ ಶಾಸಕ ಹರತಾಳು ಹಾಲಪ್ಪನವರು ನಾನು ಯಾವುದೇ ಮರಳು ಲಾರಿ ಮಾಲೀಕರಿಂದ ಕಮಿಷನ್ ಪಡೆದಿಲ್ಲ.
ಅವರ ಸವಾಲಿನಂತೆ ನಾನು ಧರ್ಮಸ್ಥಳದ ಸನ್ನಿಧಿಯಲ್ಲಿ ಫೆಬ್ರವರಿ 13 ರಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಆಣೆ ಪ್ರಮಾಣಕ್ಕೆ ಅವರೂ ಸಹ ಬರಬೇಕು ಹಾಗೂ ಯಾರಿಂದ ನಾನು ಕಮಿಷನ್ ಪಡೆದಿದ್ದೇನೆಂದು ಅವರನ್ನು ಕರೆಸಿ ಅವರ ಮೂಲಕ ಆಣೆ ಮಾಡಿಸಬೇಕೆಂದು ಸವಾಲೆಸೆದರು.
ನನ್ನ ರಾಜಕೀಯ ಜೀವನದಲ್ಲಿ ಯಾರಿಂದಲೂ ಕಮಿಷನ್ ಪಡೆಯುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದರು.
ಒಟ್ಟಾರೆಯಾಗಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಆಣೆ ಪ್ರಮಾಣದ ಮೇಲಾಟ ಹಿಂದೊಮ್ಮೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ರವರ ಘಟನೆ ನೆನಪಿಸುತ್ತಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇